ಈ ಭೂಮಿಯ ಮೇಲೆ ಪ್ರತಿದಿನವೂ ಹುಟ್ಟುವ ಸೂರ್ಯನಷ್ಟೇ ನಿಶ್ಚಿತವಾದದ್ದು ಲಿಂಗ ತಾರತಮ್ಯ ಮತ್ತು ಮಹಿಳಾ ದೌರ್ಜನ್ಯ. ಲಿಂಗ ತಾರತಮ್ಯ ತಲೆತಲಾಂತರಗಳಿಂದ ಅವ್ಯಾಹತವಾಗಿ ನಡೆಯುತ್ತ ಬಂದರೂ ದನಿಯಿಲ್ಲದವಳಾಗಿದ್ದ ಹೆಣ್ಣು ಈಗ ತನ್ನ ಮೇಲಾಗುವ ಅನ್ಯಾಯವನ್ನು, ಅದರ ಕಾರಣಗಳನ್ನು ಗುರುತಿಸುವ, ದನಿಯೆತ್ತಿ ಪ್ರತಿಭಟಿಸುವ ದಾರಿಯಲ್ಲಿ ಹೆಜ್ಜೆಗಳನ್ನಿಡುತ್ತಿದ್ದಾಳೆ. ಸಂಘಟಿತ ಪ್ರಯತ್ನವೊಂದೇ ತನ್ನ ಸಮಾನತೆಯ ಕನಸುಗಳ ಸಾಕಾರಕ್ಕೆ ಇರುವ ದಾರಿ ಎಂದು ಕಂಡುಕೊಂಡಿದ್ದಾಳೆ. ಸಾಮಾಜಿಕ ನ್ಯಾಯದ ಚಳುವಳಿಗಳಲ್ಲಿ ಲಿಂಗಪ್ರಶ್ನೆಯೂ ಮುನ್ನೆಲೆಗೆ ಬಂದು ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.
ಸ್ವಾತಂತ್ರ್ಯ, ಸಮಾನತೆ, ಬಂಧುತ್ವವೇ ಜೀವಾಳವಾದ ನಮ್ಮ ಸಂವಿಧಾನದಲ್ಲಿ ಶ್ರದ್ಧೆ, ನಂಬಿಕೆಗಳನ್ನಿರಿಸಿರುವ ನಾವು, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಂಗಾತಿಗಳು. ಒಕ್ಕೂಟವು ಒಂದು ಸಂಘವಲ್ಲ, ಸಂಸ್ಥೆಯಲ್ಲ, ಸಂಘಟನೆಯಲ್ಲ, ಬದಲಿಗೆ ಹಲವು ಜನಪರ, ಜೀವಪರ, ಪ್ರಜಾಸತ್ತಾತ್ಮಕ ಸಂಘಟನೆಗಳ ಒಗ್ಗಟ್ಟಿನ ಜಾಲ. ಸಮಾನತೆ, ಸ್ವಾತಂತ್ರ್ಯ, ಸೋದರಿತ್ವ, ಪ್ರಜಾಸತ್ತಾತ್ಮಕ ಮೌಲ್ಯ ಮತ್ತು ಸಾಮಾಜಿಕ ನ್ಯಾಯಗಳಲ್ಲಿ ನಂಬಿಕೆ ಇರುವವರೆಲ್ಲ ಇದರ ಸದಸ್ಯರು. ಪ್ರೀತಿ ಮತ್ತು ನಿರ್ಭೀತಿಯೇ ಪ್ರವೇಶ ಶುಲ್ಕ. ಈ ನೆಲ, ಜನ, ಭಾಷೆ, ಅಭಿಪ್ರಾಯಗಳನ್ನು ಸಮಾನ ಗೌರವದಲ್ಲಿ ಕಾಣುವುದೇ ನಮ್ಮ ಧರ್ಮ.
ಲಿಂಗ ತಾರತಮ್ಯ ತಲೆತಲಾಂತರಗಳಿಂದ ಅವ್ಯಾಹತವಾಗಿ ನಡೆಯುತ್ತ ಬಂದರೂ ದನಿಯಿಲ್ಲದವಳಾಗಿದ್ದ ಹೆಣ್ಣು ಇತ್ತೀಚೆಗಷ್ಟೇ ತನ್ನ ಮೇಲಾಗುವ ಅನ್ಯಾಯವನ್ನು, ಅದರ ಕಾರಣಗಳನ್ನು ಗುರುತಿಸುವ, ದನಿಯೆತ್ತಿ ಪ್ರತಿಭಟಿಸುವ ದಾರಿಯಲ್ಲಿ ಮೊದಲ ಹೆಜ್ಜೆಗಳನ್ನಿಡುತ್ತಿದ್ದಾಳೆ. ಸಂಘಟಿತ ಪ್ರಯತ್ನವೊಂದೆ ತನ್ನ ಸಮಾನತೆಯ ಕನಸುಗಳ ಸಾಕಾರಕ್ಕೆ ಇರುವ ದಾರಿ ಎಂದು ಕಂಡುಕೊಂಡಿದ್ದಾಳೆ. ಸಾಮಾಜಿಕ ನ್ಯಾಯದ ಚಳುವಳಿಗಳಲ್ಲಿ ಲಿಂಗಪ್ರಶ್ನೆಯೂ ಮುನ್ನೆಲೆಗೆ ಬಂದು ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಪ್ರಮುಖ ವಾರ್ಷಿಕ ಚಟುವಟಿಕೆ ಮಹಿಳಾ ದಿನಾಚರಣೆ. ಈ ಮಹಿಳಾ ದಿನಾಚರಣೆಗೆ ತುಮಕೂರು ವೇದಿಕೆಯಾಗಿದ್ದು ಒಂದು ಬಹಳ ವಿಶೇಷ. ಇದಕ್ಕೆ ಕಾರಣವೇ ತುಮಕೂರಿನ ಅನೇಕ ಮಹಿಳಾ ಹೋರಾಟಗಾರರು, ಸಾಹಿತಿಗಳು. ಇವರು ಸುಮಾರು ಮೂರು ದಶಕಗಳಿಂದ ಈ ಕ್ಷೇತ್ರದಲ್ಲಿ ನಿರಂತರವಾಗಿ ದುಡಿಯುತ್ತಿದ್ದಾರೆ. ಹಾಗಾಗಿಯೇ ಈ ವರ್ಷದ ಇಡೀ ಪಯಣಕ್ಕೆ ಅವರೇ ವೇದಿಕೆಯನ್ನು ಒದಗಿಸಿ, ಅದನ್ನು ಆಗುಮಾಡಲು ಟೊಂಕಕಟ್ಟಿ ನಿಂತರು.
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಮಂಗಳೂರಿನಲ್ಲಿ ೨೦೧೩ರಲ್ಲಿ ಆರಂಭವಾಗಿ ಹತ್ತು ವರ್ಷ ಕಳೆದದ್ದನ್ನು ಸಂಭ್ರಮಿಸಲು ಜನವರಿ ೮, ೨೦೨೩ ರಂದು ಬೆಂಗಳೂರಿನಲ್ಲಿ ’ಒಗ್ಗೂಡುವ ಹಬ್ಬ’ಎಂಬ ದಶಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ವಿವಿಧ ಜಿಲ್ಲೆಗಳಿಂದ ಬಂದ ಸಂಗಾತಿಗಳು ಸೇರಿದ್ದ ಕಾರ್ಯಕ್ರಮ ತುಂಬ ಚೆನ್ನಾಗಿ ಆಯ್ತು.
ಅರಿವಿನ ಪಯಣ ಕಲಬುರುಗಿಯಲ್ಲಿ ಆರಂಭ ಒಕ್ಕೂಟದ ಗೆಳತಿಯರು 8 ಮಂದಿ - ಮಂಗಳೂರು, ಬೆಂಗಳೂರು, ವಿಜಯಪುರ, ಕೊಪ್ಪಳ, ಶಿವಮೊಗ್ಗದಿಂದ 12 ರ ಬೆಳಗ್ಗೆ ಕಲಬುರುಗಿ ತಲಪಿದೆವು.