ನಮ್ಮ ಬಗ್ಗೆ

ನಮ್ಮ ಬಗ್ಗೆ

ಸಮತೆಯೆಡೆಗೆ ನಮ್ಮ ನಡಿಗೆ

ಈ ಭೂಮಿಯ ಮೇಲೆ ಪ್ರತಿದಿನವೂ ಹುಟ್ಟುವ ಸೂರ್ಯನಷ್ಟೇ ನಿಶ್ಚಿತವಾದದ್ದು ಲಿಂಗ ತಾರತಮ್ಯ ಮತ್ತು ಮಹಿಳಾ ದೌರ್ಜನ್ಯ. ಲಿಂಗ ತಾರತಮ್ಯ ತಲೆತಲಾಂತರಗಳಿಂದ ಅವ್ಯಾಹತವಾಗಿ ನಡೆಯುತ್ತ ಬಂದರೂ ದನಿಯಿಲ್ಲದವಳಾಗಿದ್ದ ಹೆಣ್ಣು ಈಗ ತನ್ನ ಮೇಲಾಗುವ ಅನ್ಯಾಯವನ್ನು, ಅದರ ಕಾರಣಗಳನ್ನು ಗುರುತಿಸುವ, ದನಿಯೆತ್ತಿ ಪ್ರತಿಭಟಿಸುವ ದಾರಿಯಲ್ಲಿ ಹೆಜ್ಜೆಗಳನ್ನಿಡುತ್ತಿದ್ದಾಳೆ. ಸಂಘಟಿತ ಪ್ರಯತ್ನವೊಂದೇ ತನ್ನ ಸಮಾನತೆಯ ಕನಸುಗಳ ಸಾಕಾರಕ್ಕೆ ಇರುವ ದಾರಿ ಎಂದು ಕಂಡುಕೊಂಡಿದ್ದಾಳೆ. ಸಾಮಾಜಿಕ ನ್ಯಾಯದ ಚಳುವಳಿಗಳಲ್ಲಿ ಲಿಂಗಪ್ರಶ್ನೆಯೂ ಮುನ್ನೆಲೆಗೆ ಬಂದು ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.

ಕರ್ನಾಟಕದಲ್ಲೂ ಅನೇಕ ಸಂಘ-ಸಂಘಟನೆ-ಚಳುವಳಿಗಳು ಮಹಿಳಾ ಸಮಸ್ಯೆಗಳನ್ನೆತ್ತಿಕೊಂಡು ದಶಕಗಳಿಂದ ಸಕ್ರಿಯವಾಗಿವೆ. ಕರ್ನಾಟಕದ ಅಂತಹ ಮಹಿಳಾಪರ ವ್ಯಕ್ತಿ-ಸಂಘ-ಸಂಘಟನೆಗಳ ಜಾಲವೇ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ. ಸಮತೆಯೆಡೆಗೆ ನಮ್ಮ ನಡಿಗೆ ಎಂಬ ಆಶಯ ಹೊತ್ತು ಅದು ೨೦೧೩ರಿಂದ ಪ್ರತಿ ವರ್ಷ ಕರ್ನಾಟಕದ ಒಂದೊಂದು ಜಿಲ್ಲಾ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ‘ಮಹಿಳಾ ಚೈತನ್ಯ ದಿನ’ವೆಂದು ಆಚರಿಸುತ್ತ ಬಂದಿದೆ. ಮಹಿಳಾ ಪರ, ಜಾತ್ಯತೀತ ಮನಸುಗಳ ಸಂಪರ್ಕ ಜಾಲವಾಗಿ ಮಹಿಳಾ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

single-img-six

ಸಮತೆಯೆಡೆಗೆ ನಮ್ಮ ನಡಿಗೆ

single_07

ಹಿಂಸೆಯ ಕಗ್ಗತ್ತಲಲಿ ಶಾಂತಿಯ ಕಂದೀಲು ಹಿಡಿದು ದ್ವೇಷದ ಬೇರು ಕಿತ್ತು ಪ್ರೀತಿಯ ಬೀಜ ಬಿತ್ತುತ್ತ ಜೊತೆಗೂಡಿ ಮಹಿಳೆಯರು ಹೊರಟಿದ್ದಾರೆ

ಘನತೆ ಉಳಿಸಲು, ದೌರ್ಜನ್ಯ ಅಳಿಸಲು ಸಮತೆಯ ಮೈತ್ರಿಯ ಕನಸು ಕಾಣುತ್ತಾ ಸಮಾನತೆಯ ಹಕ್ಕು ಕೇಳುತ್ತಿದ್ದಾರೆ

ನಾವು ನಂಬುವ ಪ್ರಜಾಸತ್ತಾತ್ಮಕ ನೆಲೆಯ, ಸಮಾನತೆಯ, ಸಾಮೂಹಿಕ ಪ್ರಯತ್ನ-ಬಹುತ್ವದ ಮೌಲ್ಯಗಳನ್ನು ನಮ್ಮ ಸಮಕಾಲೀನ ಮನಸ್ಸುಗಳಲ್ಲಿ ಬಿತ್ತುವುದು ಒಕ್ಕೂಟದ ಆಶಯವಾಗಿದೆ. ನಮ್ಮ ಚಟುವಟಿಕೆಗಳು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಎರಡು ದಿನದ ಸಮಾವೇಶಕ್ಕಷ್ಟೆ ಸೀಮಿತಗೊಂಡಿಲ್ಲ. ಅದು ಅರಿವು ಮೂಡಿಸುವ, ಸಂಘಟನಾತ್ಮಕವಾಗಿ ಬೆಳೆಯುವ, ಜಾಗೃತಗೊಂಡು ಸಬಲಗೊಳ್ಳುವ ಒಂದು ನಿರಂತರ ಪ್ರಕ್ರಿಯೆಯಾಗಿದೆ. ಯುವ ಜನಾಂಗ ಮತ್ತು ದಲಿತ ದಮನಿತರೊಂದಿಗೆ ಸಂವಾದಿಸುವ ಆಶಯದೊಂದಿಗೆ ಕಲಾ ತಂಡಗಳ ಸಹಕಾರದೊಂದಿಗೆ ಪ್ರೌಢಶಾಲೆ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ’ಅರಿವಿನ ಪಯಣ’ ಅಭಿಯಾನ ಮತ್ತು ಸಾವಿತ್ರಿಬಾಯಿ ಫುಲೆ ನೆನಪಿನ ’ಅರಿವಿನ ಅವ್ವನ ದೊಂದಿಯ ಹಿಡಿದು’ ಎಂಬ ಅಭಿಯಾನಗಳನ್ನು ಒಕ್ಕೂಟವು ಆಯೋಜಿಸಿದೆ. ಅಭಿಯಾನಗಳ ಭಾಗವಾಗಿ ಕಿರುಪುಸ್ತಿಕೆ, ಕಿರು ನಾಟಕ, ಹಾಡುಗಳ ಮೂಲಕ ಸಾವಿರಾರು ಶಾಲಾಕಾಲೇಜು ವಿದ್ಯಾರ್ಥಿಗಳನ್ನು ಮತ್ತು ಕೆಲವು ಹಳ್ಳಿಗಳ ಕೇರಿಗಳು, ನಗರದ ಸ್ಲಂಗಳಲ್ಲಿ ವಾಸಿಸುವ ದಲಿತ ದಮನಿತರನ್ನು ತಲುಪುವ ಪ್ರಯತ್ನವನ್ನು ಮಾಡುತ್ತಿದೆ. ಅದರ ಜೊತೆಗೆ ಪ್ರತಿ ವರ್ಷವೂ ಅಧ್ಯಯನ ಶಿಬಿರಗಳು, ಅಧ್ಯಯನ ಪ್ರವಾಸ, ಜನಪರ ಹೋರಾಟಗಳ ಸಹಭಾಗಿತ್ವ, ಮಹಿಳಾ ದೌರ್ಜನ್ಯದ ವಿರುದ್ಧ ವಿವಿಧ ಸಂಘಸಂಘಟನೆಗಳ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವುದೇ ಮೊದಲಾದ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡಿದೆ.

ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ತನ್ನಷ್ಟಕ್ಕೇ ಒಂದು ಸಂಘಟನೆ ಅಲ್ಲ, ಇದು ನೂರಾರು ಸಂಘ ಸಂಸ್ಥೆಗಳನ್ನು ಜೊತೆ ಸೇರಿಸುವ ಒಂದು ದಾರ. ಒಕ್ಕೂಟ ಎಂದರೆ ಹೊಸದಾರಿಯಲ್ಲಿ ಒಗ್ಗೂಡಿ ಇಟ್ಟ ಹೆಜ್ಜೆಗಳ ಉತ್ಸಾಹ. ಹೀಗೆ ಸಂಘಟನಾತ್ಮಕವಾಗಿ ಜೊತೆ ಸೇರುವ ಅವಕಾಶವು ಅನೇಕ ಸಂಘಸಂಸ್ಥೆಗಳಿಗೆ ಹೆಚ್ಚಿನ ಬಲ ಕೊಡುತ್ತಿದೆ, ಒಂಟಿತನವನ್ನು ದೂರಮಾಡಿ ವ್ಯಾಪಕ ಸಹೋದರಿತ್ವವನ್ನು ರೂಪಿಸುತ್ತಿದೆ. ಇಲ್ಲಿ ಇರುವುದು ಪ್ರೀತಿಯ ರಾಜಕಾರಣ, ಒಳಗೊಳ್ಳುವಿಕೆಯ ರಾಜಕಾರಣ. ಜನಪರ-ಜೀವಪರ ಚಿಂತನೆ ಇರುವ, ಸಮಾನತೆಯ ಆಶಯ ಹೊಂದಿದ, ಜಾತ್ಯಾತೀತ ಧರ್ಮಾತೀತ ಪ್ರಜ್ಞೆ ಇರುವ ಯಾರು ಬೇಕಾದರೂ ಈ ಒಕ್ಕೂಟದ ಭಾಗಿಯಾಗಬಹುದು. ಮಹಿಳಾ ಸಂಘಟನೆಗಳು, ಎಡಪಂಥೀಯ ಸಂಘಟನೆಗಳು, ದಲಿತ ದಮನಿತರ ಸಂಘಟನೆಗಳು, ಜನಪರ ಎನ್.ಜಿ.ಓ.ಗಳು, ಅಂಗನವಾಡಿ-ಪೌರಕಾರ್ಮಿಕ-ಬಿಸಿಯೂಟ-ಆಶಾ ಕಾರ‍್ಯಕರ್ತೆ-ಗಾರ್ಮೆಂಟ್ ಕಾರ್ಮಿಕರ ಸಂಘಟನೆಗಳು, ಲೈಂಗಿಕ ಕಾರ್ಯಕರ್ತರು-ಲಿಂಗತ್ವ ಅಲ್ಪಸಂಖ್ಯಾತರ ಗುಂಪುಗಳು, ಲೇಖಕಿಯರ ಸಂಘ, ಅಕ್ಯಾಡೆಮಿಕ್ ವಲಯದ ಸಮಾನಮನಸ್ಕರು ಸೇರಿದಂತೆ ನೂರಾರು ಸಂಘಟನೆಗಳು ಈ ಒಕ್ಕೂಟದ ಸಹಭಾಗಿಯಾಗಿವೆ. ಇಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಪರಿಪಾಠವನ್ನು ಬೆಳೆಸಲಾಗಿದೆ. ಆಗಾಗ ಸಭೆ ಸೇರುತ್ತಾ, ಗುಂಪಿನಲ್ಲಿ ಮಾತಾಡಿಕೊಳ್ಳುತ್ತಾ, ಅಗತ್ಯ ಬಿದ್ದಾಗ ಹೆಚ್ಚಿನ ಚರ್ಚೆ ಮಾಡುತ್ತಾ, ಭಿನ್ನಮತವನ್ನು ಗೌರವಿಸುತ್ತಾ, ಯಾವುದೇ ಮೂಲ ಆಶಯಗಳಿಗೆ ಧಕ್ಕೆ ಆಗದ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಿದೆ.

ಸರಳವಾಗಿ, ಅರ್ಥಪೂರ್ಣವಾಗಿ, ವ್ಯವಸ್ಥಿತವಾಗಿ ಈ ಎಲ್ಲ ಕಾರ್ಯಕ್ರಮಗಳನ್ನು ನಡೆಸಲು; ಊಟ-ವಸತಿ-ಸಂಪನ್ಮೂಲ ವ್ಯಕ್ತಿಗಳ ಪ್ರಯಾಣ ವೆಚ್ಚ ಭರಿಸಲು ಸಹೃದಯರಿಂದ, ಬಹುಜನರಿಂದ, ಸಮಾನ ಮನಸ್ಕ ಸಂಗಾತಿಗಳಿಂದ ಧನಸಂಗ್ರಹ ನಡೆಸಬೇಕೇ ಹೊರತು ಬೃಹತ್ ಮೊತ್ತವನ್ನು ಕೆಲವೇ ದಾನಿಗಳಿಂದ ಪಡೆಯಬಾರದೆನ್ನುವ ನೀತಿಗೆ ಒಕ್ಕೂಟವು ಬದ್ಧವಾಗಿದೆ. ಸಮಾವೇಶಕ್ಕೆ ಅವಶ್ಯವಿರುವ ಹಣವನ್ನು ಜನರಿಂದ, ಸಾಮಾನ್ಯರಿಂದ, ಸಂಘ ಸಂಸ್ಥೆಗಳಿಂದ, ಕರಪತ್ರ-ಕರ್ಚೀಫು-ಮಾಹಿತಿ ಪತ್ರಗಳನ್ನು ತಯಾರಿಸಿ ವಿತರಿಸಿ ಸಂಗ್ರಹಿಸಿದ್ದೇವೆ. ಪ್ರತಿಹಂತದಲ್ಲೂ ನಿಖರವಾಗಿ ಲೆಕ್ಕ ಒಪ್ಪಿಸಿ ಖರ್ಚುವೆಚ್ಚವನ್ನು ಪಾರದರ್ಶಕವಾಗಿಟ್ಟುಕೊಂಡಿದ್ದೇವೆ. ಕರ್ನಾಟಕ ರಾಜ್ಯಾದ್ಯಂತ ಇರುವ ಸೋದರಿಯರ ಬಳಗ ಇದರಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದೆ. ಈ ಮೂಲಕ ಸಾರ್ವಜನಿಕರ ಬೆಂಬಲ ಪಡೆಯುವುದು ಮತ್ತು ಜಾಗೃತಿ ಮೂಡಿಸುವುದು ನಮ್ಮ ಆಶಯ.

ಈ ನೆಲದ ಸೋದರಿಯರ ಒಗ್ಗೂಡಿಸುವ ನಮ್ಮ ಪಯಣ

ಒಕ್ಕೂಟದ ಕನಸುಗಳು ಹಲವು