ಸ್ವಾತಂತ್ರ್ಯ, ಸಮಾನತೆ, ಬಂಧುತ್ವವೇ ಜೀವಾಳವಾದ ನಮ್ಮ ಸಂವಿಧಾನದಲ್ಲಿ ಶ್ರದ್ಧೆ, ನಂಬಿಕೆಗಳನ್ನಿರಿಸಿರುವ ನಾವು, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಂಗಾತಿಗಳು. ಒಕ್ಕೂಟವು ಒಂದು ಸಂಘವಲ್ಲ, ಸಂಸ್ಥೆಯಲ್ಲ, ಸಂಘಟನೆಯಲ್ಲ, ಬದಲಿಗೆ ಹಲವು ಜನಪರ, ಜೀವಪರ, ಪ್ರಜಾಸತ್ತಾತ್ಮಕ ಸಂಘಟನೆಗಳ ಒಗ್ಗಟ್ಟಿನ ಜಾಲ. ಸಮಾನತೆ, ಸ್ವಾತಂತ್ರ್ಯ, ಸೋದರಿತ್ವ, ಪ್ರಜಾಸತ್ತಾತ್ಮಕ ಮೌಲ್ಯ ಮತ್ತು ಸಾಮಾಜಿಕ ನ್ಯಾಯಗಳಲ್ಲಿ ನಂಬಿಕೆ ಇರುವವರೆಲ್ಲ ಇದರ ಸದಸ್ಯರು. ಪ್ರೀತಿ ಮತ್ತು ನಿರ್ಭೀತಿಯೇ ಪ್ರವೇಶ ಶುಲ್ಕ. ಈ ನೆಲ, ಜನ, ಭಾಷೆ, ಅಭಿಪ್ರಾಯಗಳನ್ನು ಸಮಾನ ಗೌರವದಲ್ಲಿ ಕಾಣುವುದೇ ನಮ್ಮ ಧರ್ಮ.