ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಮಂಗಳೂರಿನಲ್ಲಿ ೨೦೧೩ರಲ್ಲಿ ಆರಂಭವಾಗಿ ಹತ್ತು ವರ್ಷ ಕಳೆದದ್ದನ್ನು ಸಂಭ್ರಮಿಸಲು ಜನವರಿ ೮, ೨೦೨೩ ರಂದು ಬೆಂಗಳೂರಿನಲ್ಲಿ ’ಒಗ್ಗೂಡುವ ಹಬ್ಬ’ಎಂಬ ದಶಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ವಿವಿಧ ಜಿಲ್ಲೆಗಳಿಂದ ಬಂದ ಸಂಗಾತಿಗಳು ಸೇರಿದ್ದ ಕಾರ್ಯಕ್ರಮ ತುಂಬ ಚೆನ್ನಾಗಿ ಆಯ್ತು.
ಕೋರಾ ಬಟ್ಟೆಯ ಮೇಲೆ ಕೈಬರಹದಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಬರೆಸಲಾಗಿತ್ತು. ಅದನ್ನು ಶಿವಮೊಗ್ಗದ ಸುಂದರೇಶ್ ಅನ್ನುವ ಕಲಾವಿದರು ಮಾಡಿಕೊಟ್ಟಿದ್ದರು. ಅದನ್ನು ಬಿಡಿಸಿ ತೋರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಸಂವಿಧಾನ ಪ್ರಸ್ತಾವನೆಯನ್ನು ಓದಿ, ನಂತರ ಒಕ್ಕೂಟ ನಡೆದು ಬಂದ ಹಾದಿಯ ಹತ್ತು ನಿಮಿಷದ ವಿಡಿಯೋವನ್ನು ಪ್ರಸಾರ ಮಾಡಿದೆವು.
ದಲಿತ ಹೋರಾಟಗಾರ್ತಿ, ರಾಜಕಾರಣಿ ರುತ್ ಮನೋರಮಾ ಮತ್ತು ಇತಿಹಾಸಶಾಸ್ತ್ರಜ್ಞರಾದ ನಿವೃತ್ತ ಪ್ರೊಫೆಸರ್ ಜಾನಕಿ
ನಾಯರ್ ಅವರುಗಳು, ಯಾವುದೇ ಶ್ರೇಣೀಕರಣವಿಲ್ಲದೆ, ಅಧಿಕಾರ ಸ್ಥಾನಗಳಿಲ್ಲದೇ ಸಮಾನಮನಸ್ಕ ಗೆಳೆಯ-ಗೆಳತಿಯರು ಒಂದು
ಗೂಡಿ ಕೆಲಸ ಮಾಡುತ್ತಾ ಒಕ್ಕೂಟ ಹತ್ತು ವರ್ಷ ಪೂರೈಸಿರುವುದನ್ನು ಗುರುತಿಸಿ ಅಭಿನಂದಿಸಿದ್ದು ನಮಗೆಲ್ಲ ಮತ್ತಷ್ಟು ಹುರುಪು
ತುಂಬಿದಂತಾಯಿತು. ನಮ್ಮ ದಾರಿಯ ಬಗ್ಗೆ ಹೆಮ್ಮೆಯೂ ಎನಿಸಿತು. ಬಹಳಷ್ಟು ವಿಚಾರಗಳ ಬಗ್ಗೆ ಇಬ್ಬರೂ ಮಾತನಾಡಿದರು.
ನಂತರದ್ದೇ ನಮ್ಮ ವಿಶೇಷ ಕಾರ್ಯಕ್ರಮ. ಒಕ್ಕೂಟವು ನಡೆದು ಬಂದ ಎಲ್ಲ ಹತ್ತು ಜಿಲ್ಲೆಗಳಲ್ಲೂ ಎಲೆಮರೆಯ ಕಾಯಿಯಂತೆ
ಹೋರಾಡಿ ತಮ್ಮ ಬದುಕನ್ನೂ ಸುತ್ತಲಿನ ಬದುಕನ್ನೂ ಹಸನು ಮಾಡಲು ಶ್ರಮಿಸಿದ್ದ ಒಬ್ಬೊಬ್ಬ ಹಿರಿಯ ಅಕ್ಕನನ್ನು
ಗುರುತಿಸಿಕೊಂಡಿದ್ದೆವು. ಅಂದು ಅವರನ್ನೆಲ್ಲ ಕೂರಿಸಿ ಗೌರವಿಸಿ ಉಡಿತುಂಬಿಸಿ ಪರಸ್ಪರ ಪ್ರೀತಿಯನ್ನು ಹಂಚಿಕೊಂಡೆವು. ನಡೆದು
ಬಂದ ಹಾದಿಯ ನೆನಪುಗಳು ಮರುಕಳಿಸಿದವು. ಅವೆಲ್ಲವನ್ನು ನಮ್ಮ ಒಕ್ಕೂಟದ ಫೇಸ್‌ಬುಕ್ ಪೇಜಿನಲ್ಲಿ ನೋಡಬಹುದು. ಪ್ರಿಂಟ್
ಮತ್ತು ವಿಶುವಲ್ ಮೀಡಿಯಾಗಳಲ್ಲಿ ಪ್ರಸಾರ ಮಾಡಲಾಗಿತ್ತು.
ನಂತರದ ಗೋಷ್ಠಿಯಲ್ಲಿ ನಮ್ಮ ಗೆಳತಿ ಸಬಿತಾ, ಪುಣೆಯ ಸಿಂಬಯಾಸಿಸ್ ಸಂಸ್ಥೆಯ ಶಶಿಕಲಾ ಗುರುಪುರ ಮತ್ತು ಲೇಖಕಿ
ಹೋರಾಟಗಾರ್ತಿ ಎನ್. ಗಾಯತ್ರಿ ಅವರುಗಳು ವಿವಿಧ ನೆಲೆಗಳಲ್ಲಿನ ಸ್ತ್ರೀವಾದವನ್ನು ಉದಾಹರಣೆಗಳ ಮೂಲಕ ಬಹಳ ಚೆನ್ನಾಗಿ
ವಿವರಿಸಿದರು. ಮಧ್ಯಾನ್ಹದ ಗೋಷ್ಠಿಯಲ್ಲಿನ ಅನುಭವ ಕಥನ ಕಾರ್‍ಯಕ್ರಮ ನಮಗೆಲ್ಲ ನಿಜಕ್ಕೂ ಮಾದರಿಗಳು. ಕಷ್ಟದ ಬದುಕನ್ನು
ಮೆಟ್ಟಿನಿಂತು ಮುನ್ನಡೆಯುತ್ತಿರುವ ಧೀರೆಯರು ಅವರು. ಸಂಜೆ ಶಿವಮೊಗ್ಗದ ಸಂಗಾತಿ ಕೃತಿ ಪುರಪ್ಪೆಮನೆಯವರು ಭಾಗವತಿಕೆಯಲ್ಲಿ
ನಡೆದ ’ಪದ್ಮಾವತಿ ಪ್ರಸಂಗ’ಎಂಬ ಸ್ತ್ರೀವಾದಿ ಯಕ್ಷಗಾನ ತಾಳಮದ್ದಲೆ ಪ್ರದರ್ಶನವಂತೂ ಎಲ್ಲರಲ್ಲೂ ಸಂಚಲನ ಮೂಡಿಸಿತು.
ಹಾಗೆಯೇ ಕೆಲ ವಿಮರ್ಶೆಗಳೂ ಬಂದವು. ವಿಮರ್ಶೆಗಳಿಂದ ನಮ್ಮ ನಡೆಗಳನ್ನು ನಾವು ಇನ್ನಷ್ಟು ಸ್ಪಷ್ಟಗೊಳಿಸಿಕೊಳ್ಳುತ್ತಾ
ಹೋಗುತ್ತೇವೆನ್ನುವುದು ಸತ್ಯ. ಶಿವಮೊಗ್ಗ ಒಕ್ಕೂಟದ ಗುಂಪಿನವರು ಸೇರಿ ಮಾಡಿರುವ ವಿಡಿಯೋ ತುಣುಕುಗಳನ್ನು ಒಟ್ಟು ಸೇರಿಸಿ
ಚೆಂದದ ವಿಡಿಯೋ ಮಾಡಿಕೊಟ್ಟದ್ದು ನಮ್ಮ ಶಿವಮೊಗ್ಗದ ಗೆಳೆಯ ಹೊನ್ನಾಳಿ ಚಂದ್ರು. ಹಾಗೆಯೇ ಒಕ್ಕೂಟ ಬೆಳೆದು ಬಂದ ಹಾದಿಯ
ಹತ್ತು ನಿಮಿಷದ ಇನ್ನೊಂದು ವಿಡಿಯೋವನ್ನೂ ಅವರೇ ಮಾಡಿಕೊಟ್ಟಿದ್ದಾರೆ. ಅವರಿಗೆ ನಮ್ಮೆಲ್ಲರ ಪ್ರೀತಿಯ ಥ್ಯಾಂಕ್ಸ್. ಇಡೀ
ಕಾರ್ಯಕ್ರಮವನ್ನು ತಮ್ಮ ರೆಕಾರ್ಡಿಂಗ್ ಮತ್ತು ಫೋಟೋಗಳಲ್ಲಿ ಸೆರೆಹಿಡಿದು ಕೊಟ್ಟ ಒಕ್ಕೂಟದ ಕಿರಿಯ ಗೆಳತಿ ನವ್ಯಾ ಕಡಮೆಗೆ
ಶಹಬ್ಬಾಶ್ ಚಪ್ಪಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕ್ರಮವನ್ನು ಲೈವ್ ಮಾಡಿ ಮೀಡಿಯಾ ಸುದ್ದಿ ಮಾಡಿದ ಹುಲಿಕುಂಟೆ
ಮೂರ್ತಿಯವರ ತಂಡಕ್ಕೆ ಶರಣು.
ಸೋದರಿತ್ವದ ಜಾಲವನ್ನು ಮತ್ತಷ್ಟು ಹಿಗ್ಗಿಸಿಕೊಳ್ಳಲು ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ತುಮಕೂರಿನಲ್ಲಿ ಸೇರೋಣ.