ಸ್ಥಳ: ಜೀವನಧಾರಾ ಕೆಂದ್ರ
ಭಾಗವಹಿಸಿದವರು: ಸುಮಾರು 40–60 ಮಂದಿ (ಬಂದು ಹೋಗುತ್ತಿದ್ದವರು ಸೇರಿದಂತೆ)
ಬಣ್ಣಬಣ್ಣದ ಬಟ್ಟೆ, ಬಣ್ಣ ಬಣ್ಣದ ದಾರ, ಹಾಲಿನಲ್ಲಿ ಹರವಿತ್ತು, ಗೋಡೆ ಮೇಲೆ ಒಕ್ಕೂಟದ ಬ್ಯಾನರ್ ಜೊತೆಗೆ ಈ ಹಿಂದೆ ಹೊಲಿದ ಕೌದಿಗಳು ಕಂಗೊಳಿಸುತ್ತಿದ್ದವು. ಬಣ್ಣ ಬಣ್ಣದ ಬಟ್ಟೆ ತೊಟ್ಟ ಹೆಣ್ಣು ಮಕ್ಕಳು ನಿಧಾನವಾಗಿ ಬಂದು ಸೇರತೊಡಗಿದರು. ಇದು ಯಾಕೆ, ಏನು, ಎತ್ತ ಎಂಬ ಕುತೂಹಲದ ಮನಸ್ಸುಗಳಿಗೆ ಕೌದಿ ಒಕ್ಕೂಟದಲ್ಲಿ ಯಾಕೆ ಮಾಡುತ್ತೇವೆ ಎಂಬ ವಿವರ ಕೊಟ್ಟೆವು.
ಒಂದು ಹಂತದಲ್ಲಿ ಕೌದಿ ಬಗ್ಗೆ ಬರೆದ ಲೇಖನ ಓದಿ ಹೇಳಿದೆವು. ಆಮೇಲೆ ಬೇರೆ ಬೇರೆ ಸಮಯದಲ್ಲಿ ಬಂದವರಿಗೆ ಅವರ ಹತ್ತಿರ ಕುಳಿತು ಪಿಸುಗುಡುತ್ತಾ ಕತೆ ಹೇಳಿದೆವು. “ಗೆಲುವು ನಮ್ಮದು” ಹಾಡನ್ನು ಉತ್ಸಾಹದಿಂದ ಹಾಡಿದೆವು. ಪರಿಚಯ ಮಾಡಿಕೊಳ್ಳುವುದು ನಡುನಡುವೆ ನಡೆಯುತ್ತಲೇ ಇತ್ತು.
ಕೌದಿಗೆ ಏನಾದರೂ ಒಂದು ವಿಚಾರ ಇಟ್ಟುಕೊಳ್ಳುವ ಬಗ್ಗೆ ಮಾತುಕತೆ ನಡೆಯಿತು. ಸಮಾನತೆ, ಸಹೋದರಿತ್ವ, ಪ್ರೀತಿ, ಸಂಬಂಧ ಹೀಗೆ ಕೆಲವು ಪದಗಳು ಬಂದವು. ಪ್ರೀತಿ ಅಂದಿದ್ದೇ ಹೃದಯಗಳ ಚಿತ್ರಗಳು ಅರಳತೊಡಗಿದವು. ನಂತರ ಸಾಂಕೇತಿಕ ಚಿತ್ರಗಳು ಮೂಡಿಬಂದವು — ತಕ್ಕಡಿ, ಕೈ ಕೈ ಹಿಡಿದು ನಡೆಯುವುದು ಇತ್ಯಾದಿ. ಈ ಚೌಕಟ್ಟು ಸಾಕೆನಿಸಿ ಮನಬಂದಂತೆ ಹೊಲಿಯುವುದೂ ಶುರುವಾಯಿತು.
ಹಾಸನದ ವಿಶೇಷತೆ ಒಂದಿಷ್ಟು ಇರಲಿ ಅಂತ ಬೇಲೂರು ಹಳೇ ಬೀಡಿನ ನಂದಿಯೂ ಮೂಡಿಬಂತು. ಹಾಸನದ ಆಲೂಗಡ್ಡೆಯೂ ರೂಪುತಾಳಿತು. ಹೊರದೇಶದಿಂದ ಬಂದಿದ್ದರೂ ಈಗ ನಮ್ಮದಾಗಿ ಬೆಳೆದ ಆಲೂಗಡ್ಡೆ ನೆನಪಿನಲ್ಲಿ, ಬೇರೆ ನೆಲದಿಂದ ಬಂದ ಜನರನ್ನು ನಾವು ಇನ್ನೂ ನಮ್ಮವರನ್ನಾಗಿಸಿಕೊಳ್ಳಲು ಕಷ್ಟಪಡುತ್ತಿದ್ದೇವೆ ಎಂಬ ಚಿಂತನೆಯೂ ಹಾದು ಹೋಯಿತು.
ಸೂಜಿ ದಾರವನ್ನು ಮೊದಲ ಬಾರಿಗೆ ಹಿಡಿದವರೂ ಇದ್ದರು. ಹಿಂದೊಮ್ಮೆ ಹೊಲಿದ ನೆನಪಿನಿಂದ ಹೊಲಿದವರೂ ಇದ್ದರು. ಒಂದಿಬ್ಬರು ಪುರುಷರೂ ಜೊತೆಗೆ ಹೊಲಿದರು.
ಹೊಲಿಗೆ ನಿರಾಳವಾಗುತ್ತಿದ್ದಂತೆಯೇ ಹಾಡು, ಕತೆ, ಕವನಗಳ ವಾಚನ ಶುರುವಾಯಿತು. ರೂಪಾ ಹಾಸನ ಸ್ತ್ರೀ ಸಂವೇದನೆಯ ಕವನಗಳನ್ನು ಓದಿದರು. ಅರ್ಥವಾಗಲು ಬಿಡಿಬಿಡಿಯಾಗಿ ವಿವರಿಸಿದರು. ಮಮತಾ ಶಿವು ತಮ್ಮ ಕನಸಿನ ಕವನ ಓದಿದರು ಮತ್ತು ಸುಂದರ ಜನಪದ ಕಥೆಯನ್ನೂ ಹೇಳಿದರು.
ಜನಪದ ಕಥೆಯಲ್ಲಿ ಮಹಿಳೆ ದೇವಸ್ಥಾನದಲ್ಲಿ ಒಬ್ಬಟ್ಟು ತಿನ್ನುವ ಘಟನೆ ಮತ್ತು ದೇವರ ಪ್ರತಿಕ್ರಿಯೆ ಎಲ್ಲರಲ್ಲೂ ನಗೆ ಮತ್ತು ಚಿಂತನೆ ಮೂಡಿಸಿತು.
ಭಾನುಮತಿ ಪ್ರಾಸಬದ್ಧ ಹಾಸ್ಯ ಚುಟುಕುಗಳಿಂದ ಮನರಂಜಿಸಿದರು. ಸ್ತ್ರೀವಾದಿ ಹಾಸ್ಯಚಟಾಕಿಗಳೂ ಕೇಳಿಬಂದವು. ಸಿನಿಮಾ ಹಾಡುಗಳು, ಶಾಡ್ರಾಕ್ ಅವರ ಹಾಡು, ಕುಣಿತ — ಸಂಭ್ರಮ ತುಂಬಿ ಹರಿಯಿತು.
ನಂತರ ‘ಹುಚ್ಚಿ’ ಎಂಬ ಮಲೆಯಾಳ ಕಥೆ ಓದಿದ್ದು ಮಹಿಳೆಯ ಅನುಭವಗಳ ಕುರಿತು ಚಿಂತನೆಗೆ ಕಾರಣವಾಯಿತು.
ಸಂಜೆಯ ಹೊತ್ತಿಗೆ ಸುಮಾರು 40 ವಿನ್ಯಾಸಗಳು ತಯಾರಾಗಿ ಗೋಡೆಯ ಮೇಲೆ ರಾರಾಜಿಸುತ್ತಿದ್ದವು.
ಮತ್ತೆ ಹೊಲಿಗೆ ಕೆಲಸ ಮುಂದುವರಿಯಿತು. ಜನ ಸೇರುತ್ತಾ ಹೊಲಿಗೆಯಲ್ಲಿ ತಲ್ಲೀನರಾದರು.
ಸಬೀಹಾ ಬರೆದ ಕವನ ಓದಿದ ನಂತರ ಅಡುಗೆ ಕೆಲಸದ ಮಹತ್ವ, ಅದರ ಇತಿಹಾಸ, ವಿಜ್ಞಾನ, ಸಾಂಸ್ಕೃತಿಕ ಅಂಶಗಳ ಬಗ್ಗೆ ಚರ್ಚೆ ನಡೆಯಿತು. ಅಡುಗೆ ಕಲೆ ಹಾಗೂ ಮಹಿಳೆಯ ಅನುಭವ ಎಂಬ ಅಭಿಪ್ರಾಯಗಳು ಹೊರಬಂದವು.
ಲಿನಟ್ (ಹಾಸನದ ಸಿಸ್ಟರ್) ಮೆಡಿಟೇಶನ್ ಮಾಡಿಸಿದರು. ಪ್ರತಿಯೊಬ್ಬರೂ ತಮ್ಮ ಬಗ್ಗೆ ಇಷ್ಟವಾದ ಅಂಶಗಳನ್ನು ಹಂಚಿಕೊಂಡರು. ಪರಿಚಯ ಮತ್ತಷ್ಟು ವಿಸ್ತರಿಸಿತು.
ವಾಣಿ ಕೌದಿ ಉಪಮೆ ಮೂಲಕ ಲಿಂಗ ಸೂಕ್ಷ್ಮತೆಯ ಏಕವ್ಯಕ್ತಿ ಪ್ರದರ್ಶನ ಮಾಡಿದರು. ಉತ್ತಮ ಸ್ಪಂದನೆ ದೊರಕಿತು. ಮಹಿಳೆಯ ಒಕ್ಕೂಟದ ಬಗ್ಗೆ ಸಮಾಜದ ಭಯದ ಕುರಿತ ಚರ್ಚೆ ನಡೆಯಿತು.
ರೂಪಾ ಹಾಸನ ಚರ್ಚೆಯಲ್ಲಿ ಹೆಣ್ಣಿನ ತುಟಿಯ ಮೇಲ್ಭಾಗಕ್ಕೆ ಹೆಸರಿಲ್ಲ ಎಂಬ ವಿಚಾರ ಎತ್ತಿದರು. ಅದಕ್ಕೆ ‘ಧೀಸೆ’ ಎಂಬ ಹೊಸ ಪದ ರೂಪಿಸಲಾಯಿತು. ‘ಧೀ’ ಪದದಿಂದ ಬಂದ ಈ ಪದಕ್ಕೆ ಬುದ್ಧಿವಂತಿಕೆ, ಅನುಭವದಿಂದ ಕಲಿಯುವ ಸಾಮರ್ಥ್ಯ, ತರ್ಕಬದ್ಧತೆ ಇತ್ಯಾದಿ ಅರ್ಥಗಳನ್ನು ನೀಡಲಾಯಿತು.
ಕೊನೆಯಲ್ಲಿ ಹೊಲಿದ ತುಂಡುಗಳನ್ನು ಜೋಡಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ಎರಡು ಕೌದಿ ಹೊಲಿಯುವಷ್ಟು ಸಾಮಗ್ರಿ ತಯಾರಾಯಿತು. ಮಂಗಳೂರಿನ ಚೈತ್ರಾ ಮತ್ತು ಲಾವಣ್ಯ ನಿರಂತರ ಸಹಕಾರ ನೀಡಿದರು.
ದೇಣಿಗೆ: ರೂ. 3000/- ಸಂಗ್ರಹವಾಯಿತು.
ಜೀವನಧಾರ ಸಂಸ್ಥೆಯ ವಾತಾವರಣ ಆರಾಮದಾಯಕವಾಗಿತ್ತು. ಪ್ರೇರಣಾ ಖಾನಾವಳಿ ಮತ್ತು ಪ್ರಜ್ವಲ್ ಕೇಟರಿಂಗ್ ರುಚಿಯಾದ ಊಟ ಒದಗಿಸಿದರು. ಹಾಸನದ ಸಂಗಾತಿಗಳ ಆತಿಥ್ಯ ವಿಶೇಷವಾಗಿತ್ತು. ಮಮತಾ ಶಿವು ಅವರ ಮನೆಯಲ್ಲಿ ಆತ್ಮೀಯ ಆತಿಥ್ಯ ಸಿಕ್ಕಿತು.
ಕೌದಿ ಹೊಲಿಯುವುದು ಜೊತೆಯಾಗುವ, ಅರಿಯುವ, ಬೆಳೆಯುವ ಸುಂದರ ನೆಪ. ಮನಸ್ಸು ಕಟ್ಟುವ ಕೆಲಸಗಳು ಹೀಗೇ ಮುಂದುವರಿಯಲಿ.
– ವಾಣಿ ಪೆರಿಯೋಡಿ
ಫೋಟೋಗಳನ್ನು ನೋಡಿರಿ