ಕಲಬುರುಗಿ

ಕಲಬುರುಗಿ - ೨೦೨೨

ಅರಿವಿನ ಪಯಣ ಕಲಬುರುಗಿಯಲ್ಲಿ ಆರಂಭ

ಒಕ್ಕೂಟದ ಗೆಳತಿಯರು 8 ಮಂದಿ - ಮಂಗಳೂರು, ಬೆಂಗಳೂರು, ವಿಜಯಪುರ, ಕೊಪ್ಪಳ, ಶಿವಮೊಗ್ಗದಿಂದ 12 ರ ಬೆಳಗ್ಗೆ ಕಲಬುರುಗಿ ತಲಪಿದೆವು. ಸ್ವಲ್ಪ ಮಾತುಕತೆ ಮಾಡಿಕೊಂಡು, ಬೇರೆ ಬೇರೆ ಕಾಲೇಜುಗಳಿಗೆ ಕಲಬುರಗಿ ಸಂಗಾತಿಗಳ ಜೊತೆಗೆ ನಡೆದೆವು. ಒಟ್ಟು 9 ಕಾಲೇಜುಗಳಲ್ಲಿ ನಮ್ಮ ಅರಿವಿನ ಪಯಣದ ವೀಡಿಯೋ ಗಳೊಂದಿಗೆ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಊಟದ ನಂತರ ವಿ.ಜಿ ವಿಮೆನ್ಸ್ ಕಾಲೇಜಿನಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಎಲ್ಲಾ ಕೊನೆಯ ಕ್ಷಣದ ಒತ್ತಡಗಳ ನಡುವೆ ಸಂಭ್ರಮಕ್ಕೆ ಏನೂ ಕೊರತೆ ಆಗಲಿಲ್ಲ. ನಾವು ಹೋದ ಕಾಲೇಜುಗಳಲ್ಲಿ ವೀಡಿಯೋ ಬಳಕೆಗೆ ಒಂದಷ್ಟು ತಾಂತ್ರಿಕ ಅಡಚಣೆಗಳು ಆದವು. ಆದರೆ ಒಂದಷ್ಟು ವೀಡಿಯೋ ಮತ್ತೊಂದಷ್ಟು ನಮ್ಮದೇ ನೇರ ಆಟಪಾಟಗಳನ್ನು ಮಾಡಿ ಎಲ್ಲಾ ಕಡೆ ಜೈ ಅನ್ಮಿಸಿದೆವು. ಕಲಬುರುಗಿಯ ಸಂಗಾತಿಗಳು ಎಂತೆಂತಹ ಒತ್ತಡಗಳನ್ನು, ಹಿಂದಿನ ದಿನವಷ್ಟೇ ಸಂಭವಿಸಿದ ಆಪ್ತರ ಮರಣದ ಸಂಕಟವನ್ನು ನುಂಗಿಕೊಂಡು, ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರುವಂತೆ ನೋಡಿ ಕೊಂಡರು. ಟೆಕ್ನಾಲಜಿ ನಮ್ಮ ನೇರ ಒಡನಾಟಕ್ಕೆ ಪರ್ಯಾಯ ಅಲ್ಲ ಎಂಬುದು ಗೊತ್ತಿರುವ ವಿಚಾರ. ಆದರೆ ಅನಿವಾರ್ಯ ಹೊತ್ತಿನಲ್ಲಿ ಟೆಕ್ನಾಲಜಿ ಬಳಸುವ ಅಗತ್ಯವನ್ನು ಮನಗಂಡು ವೀಡಿಯೋ ಗಳ ಜೊತೆಗೆ ನಡೆದಿದ್ದೆವು. ಅದಕ್ಕಾಗಿ ಒಂದೇ ಹೊತ್ತಿನಲ್ಲಿ 8 ಕಾಲೇಜುಗಳಲ್ಲಿ ಅರಿವಿನ ಪಯಣ ಸಾಧ್ಯವಾಗಿದ್ದು ಎಲ್ಲರಿಗೂ ವಿಶೇಷ ಅನುಭವ. ಟೆಕ್ನಾಲಜಿ ಬಳಕೆಯಲ್ಲಿ ಕಲಿಯುವುದು ಬಹಳ ಇದೆ. ಇಂದಿನ ಮಟ್ಟಿಗೆ ಹೇಗೋ ನಿಭಾಯಿಸಿದೆವು. ಬಹಳ ಖುಷಿ ಕೂಡಾ ಪಟ್ಟೆವು. ಒಕ್ಕೂಟದ ಗೆಳತಿಯರ ಉತ್ಸಾಹ, ಕಲಬುರಗಿಯ ಸಂಗಾತಿಗಳ ಪರಿಶ್ರಮದ ಫಲವಾಗಿ ಇಷ್ಟು ಮಾಡಲು ಸಾಧ್ಯವಾಗಿರುವುದು ಸಾರ್ಥಕ ಭಾವನೆ ತಂದಿದೆ.

Bengaluru

ಕಲಬುರುಗಿ - 2022