ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು 2013ರಲ್ಲಿ ಮಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದಿತು. ಬಿಡಿಬಿಡಿಯಾಗಿ ಮಹಿಳಾ ಸಂಘಟನೆಗಳು ಸ್ಥಳೀಯವಾಗಿ ನಡೆಸುವ ಮಹಿಳಾ ದಿನಾಚರಣೆಗಳ ಅರಿವು ಅನುಭವಗಳು ಏಕಕಾಲದಲ್ಲಿ ಎಲ್ಲರಿಗೂ ಸಂವಹನಗೊಳ್ಳುವುದು ಸಾಧ್ಯವಿರಲಿಲ್ಲ.
ಸಂಘಟನೆಗಳೆಲ್ಲ ಒಟ್ಟಾಗಿ ಸೇರಿ ಮಹಿಳಾ ದಿನಾಚರಣೆಯನ್ನು ಆಚರಿಸುವುದು, ಲಿಂಗಸೂಕ್ಷ್ಮತೆ ಕಾರ್ಯಾಗಾರ ನಡೆಸುವುದು, ಜಾಥಾ ಮೌನಜಾಗೃತಿ ನಡೆಸುವುದು, ಬೃಹತ್ ಸಮಾವೇಶಕ್ಕೆ ಹಲವರು ಕೈಜೋಡಿಸಿ ತಯಾರಿ ನಡೆಸುವುದೇ ಮೊದಲಾದ ಕ್ರಿಯೆಗಳಿಂದ ಏರ್ಪಡುವ ಸೋದರಿತ್ವ ಮತ್ತು ಸ್ನೇಹಜಾಲ ಇಂದಿಗೆ ಅವಶ್ಯ. ಗರಿಷ್ಠ ಪ್ರಮಾಣದ ಸಂವಹನ ಸಾಧ್ಯತೆಯಿಂದಾಗಿ ಹೋರಾಟದ ಅನುಭವ ಲೋಕ ಮತ್ತೂ ವಿಶಾಲಗೊಂಡು ಬಹುಮುಖಿ ಚಿಂತನೆಗಳನ್ನೊಳಗೊಳ್ಳಲು ಇದರಿಂದ ಸಾಧ್ಯವಾಗಬಲ್ಲದೆಂಬ ಹಿರಿಯಾಸೆ ಈ ಒಕ್ಕೂಟದ್ದು.